ಕನ್ವಾಲ್ವುಲೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಕ್ಯಾಲೊನಿಕ್ಟಿಯಾನ್ ಬೋನಾನಾಕ್ಸ್ ಇದರ ಶಾಸ್ತ್ರೀಯ ಹೆಸರು. ಇದು ಅಮೆರಿಕದ ಉಷ್ಣಪ್ರದೇಶಗಳ ಮೂಲದ್ದು. ಭಾರತದಲ್ಲಿ ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸಲಾಗುತ್ತದೆ. ಇದೊಂದು ಬಹುವಾರ್ಷಿಕ ಬಳ್ಳಿ. ಇದರ ಕಾಂಡದಲ್ಲಿ ಬಿಳಿಯ ಬಣ್ಣದ ಹಾಲ್ನೊರೆಯಿದೆ. ಎಲೆಗಳು ಹೃದಯಾಕಾರದವು. ಹೂಗಳಿಗೆ ಸುವಾಸನೆ ಉಂಟು. ಅವುಗಳ ಬಣ್ಣ ಬಿಳಿ ಇಲ್ಲವೆ ಊದಾ,  ಬಲು ಆಕರ್ಷಕವಾಗಿವೆ. ರಾತ್ರಿ ಅರಳಿ ಮರುಬೆಳಗ್ಗೆ ಬಾಡುತ್ತವೆ. 

ಚಂದ್ರಪುಷ್ಪವನ್ನು ಬೀಜಗಳಿಂದ ಬೆಳೆಸಲಾಗುತ್ತದೆ. ಕೆಲವೊಮ್ಮೆ ಕಾಂಡತುಂಡುಗಳಿಂದ ಬೆಳೆಸುವುದೂ ಉಂಟು. ಇದರ ಪ್ರಾಮುಖ್ಯ ಅಲಂಕಾರ ಮಾತ್ರವಲ್ಲದೆ ಬೇರೆ ಉಪಯೋಗಗಳೂ ಉಂಟು. ಇದರ ಎಳೆಯ ಎಲೆ ಮತ್ತು ಪುಷ್ಪಪಾತ್ರೆಗಳನ್ನು ತರಕಾರಿಯಾಗಿ ಬಳಸುತ್ತಾರೆ.  ಇದರ ಬೇರಿನ ತೊಗಟೆಯನ್ನು ವಿರೇಚಕವಾಗಿ ಉಪಯೋಗಿಸುವುದುಂಟು.		(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ